ಪ್ಲಮ್
	ರೋಸೇಸೀ ಕುಟುಂಬಕ್ಕೆ ಸೇರಿದ ಫಲವೃಕ್ಷ. ಸಕ್ಕರೆ ಬಾದಾಮಿ (ಏಪ್ರಿಕಾಟ್), ಬಾದಾಮಿ (ಅಲ್ಮಂಡ್), ಪೀಚ್ ಜಾತಿಗಳಿಗೆ ಹತ್ತಿರ ಸಂಬಂಧಿ. ಪ್ಲಮ್ ವೃಕ್ಷವೂ ಸ್ಭೆರಿದಂತೆ ಇವೆಲ್ಲವೂ ಪ್ರೂನಸ್ ಎಂಬ ಒಂದೇ ಜಾತಿಗೆ ಸೇರಿವೆ. ಪ್ಲಮ್ ಪ್ರಭೇದದ ಶಾಸ್ತ್ರೀಯ ಹೆಸರು ಪ್ರೂನಸ್ ಡೊಮೆಸ್ಟಿಕ.
	ಕಾಕಸಸ್ ಪರ್ವತ ಪ್ರದೇಶ ಪ್ಲಮ್ ಮರದ ತೌರು ಎಂದು ಭಾವಿಸಲಾಗಿದೆ. ಯೂರೋಪ್ ಖಂಡದ ಅನೇಕ ದೇಶಗಳಲ್ಲಿ ಬೆಳಯುತ್ತದೆ. ಅಮೆರಿಕದ ಫ್ಲಾರಿಡ ಪ್ರಾಂತ್ಯದಲ್ಲಿ ಹೇರಳವಾಗಿ ಈ ಬೆಳೆಯನ್ನು ಬೆಳೆಸುತ್ತಾರೆ. ಭಾರತದಲ್ಲಿ ಪ್ಲಮ್ ಬೇಸಾಯ ಅಷ್ಟು ಹೆಚ್ಚಾಗಿಲ್ಲ. ಹಿಮಾಲಯ ಪರ್ವತದ ತಪ್ಪಲು ಪ್ರದೇಶದಲ್ಲಿ ಕೊಂಚ ಪರಿಮಾಣದಲ್ಲಿ ಬೆಳೆಸುತ್ತಿದ್ದಾರೆ. ಹಿಮಾಚಲ ಪ್ರದೇಶದ ಸುಮಾರು ಒಂದು ಸಾವಿರ ಹೆಕ್ಟೇರುಗಳಲ್ಲಿ ಈ ಬೆಳೆಯಿದೆಯೆಂದು ಅಂದಾಜು. ಈ ಪ್ರದೇಶದ ಚಿನಿ ಪ್ರಾಂತದಲ್ಲಿ ಸುಮಾರು ಮೂರು ಸಾವಿರ ಮರಗಳು ಕಾಡಿನಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತಿರುವುದು ಪತ್ತೆಯಾಗಿದೆ. ದಕ್ಷಿಣ ಭಾರತದ ನೀಲಗಿರಿಯಲ್ಲಿ ಪ್ರೊನಸ್ ಡೊಮೆಸ್ಟಿಕ ಸ್ಯಾಲಿಸಿಸ್ ಎಂಬ ಉಪಪ್ರಭೇದಕ್ಕೆ ಸೇರಿದ ಪ್ಲಮ್ ಗಿಡಗಳನ್ನು ಬೆಳೆಸಲಾಗುತ್ತಿದೆ. ಪ್ರೊನಸ್ ಡೊಮೆಸ್ಟಿಕ ಸೈಂಡತಿ ಎಂಬ ಪ್ರಭೇದವೂ ಇಲ್ಲಿ ಬೇಸಾಯದಲ್ಲಿದೆ.
	ಮಧ್ಯಮ ಎತ್ತರದ ಮರ ಇದು. ಇದರ ಎಳೆಯ ಕೊಂಬೆಯಲ್ಲಿ ಮೇಲೆ ಮೃದುವಾದ ರೋಮಗಳುಂಟು. ಎಲೆಗಳ ತಳಭಾಗದ ಮೇಲೆ ಕೂಡ ರೋಮಗಳಿವೆ. ಹೂಗಳು ಬಿಳಿಯ ಬಣ್ಣದವು. ಫಲಗಳ ಬಣ್ಣ ಕೆಂಪು ಇಲ್ಲವೆ ಬಂಗಾರ. ಹಣ್ಣಿನ ಒಳಭಾಗದಲ್ಲಿ ಗಟ್ಟಿವಾಟೆಯುಂಟು. ವಾಟೆಯ ಹೊರಮೈ ಒರಟಾಗಿಯೋ ಇಲ್ಲವೆ ಸಣ್ಣ ಸಣ್ಣ ಗುಳಿಗಳಿಂದ ಕೂಡಿಯೊ ಇದೆ.

	ಈ ಮರದಲ್ಲಿ ಅನೇಕ ಬಗೆಗಳುಂಟು. ತಮ್ಮ ಬಾಹ್ಯರೂಪ, ಎಲೆಗಳ ಉದ್ದ ಅಗಲ, ಹಣ್ಣುಗಳನ್ನು ಬಿಡುವ ರೀತಿ, ಹಣ್ಣುಗಳ ಗುಣ ಮತ್ತು ಲಕ್ಷಣಗಳಲ್ಲಿ ಈ ಬಗೆಗಳು ಬಹುವಾದ ವ್ಯತ್ಯಾಸ ತೋರುತ್ತವೆ. ಇಂಥ ಬಗೆಗಳಲ್ಲಿ ಮುಖ್ಯವಾದವು ಡಾಮ್‍ಸನ್, ಮೆಯ್ನಾರ್ಡ್, ಗ್ರೀನ್‍ಗೇಜ್, ಗ್ರ್ಯಾಂಡ್‍ಡ್ಯೂಕ್ ಮತ್ತು ವಿಕ್ಟೋರಿಯ ಎಂಬವು.

	ಪ್ಲಮ್ ಗಿಡಗಳನ್ನು ಬೀಜಗಳಿಂದ ಬೆಳೆಸುವುದು ಅಷ್ಟಾಗಿ ಯುಕ್ತವಲ್ಲ. ಬೀಜದಿಂದ ಬೆಳೆಸಿದ ಮರಗಳ ಹಣ್ಣುಗಳು, ತಾಯಿಮರದ ಹಣ್ಣುಗಳಂತಲ್ಲದೆ, ತೆಳುವಾದವೂ ಕಡಿಮೆ ರುಚಿಯುಳ್ಳವೂ ಆಗಿರುವುವು: ಆದ್ದರಿಂದ ಕಸಿ, ಗೂಟಿ ಮುಂತಾದ ವಿಧಾನಗಳಿಂದ ಪಡೆದ ಕಾಂಡ ತುಂಡುಗಳಿಂದ ಮತ್ತು ಬೇರುಗಳಿಂದ ಬರುವ ಸಸಿಗಳಿಂದ ಬೆಳೆಸಲಾಗುತ್ತದೆ. ಪ್ಲಮ್ ಮರಗಳನ್ನು ಹಣ್ಣಿಗೋಸ್ಕರ ಮಾತ್ರ ಬೆಳೆಸುವುದರಿಂದ ಈ ಮರಗಳನ್ನೇ ಶುದ್ಧ ಬೆಳೆಯಾಗಿ ಬೆಳೆಸುವುದು ಉತ್ತಮ. ಬೇರೆ ಜಾತಿಯ ಮರಗಳೊಂದಿಗೆ ಬೆಳೆಸಿದರೆ ಆ ಮರಗಳ ಬೇರುಗಳಿಂದ ಪ್ಲಮ್ ಮರಗಳಿಗೆ ತೊಂದರೆಯಾಗಬಹುದು. ಅಲ್ಲದೆ ಅಲಾಯಿದ ಬೆಳೆಸಿದರೆ ತಕ್ಕ ಗೊಬ್ಬರ ಹಾಕುವುದಕ್ಕೂ, ಕಸಿಮಾಡುವುದಕ್ಕೂ ಅನುಕೂಲ. ಫಸಲು ಬಿಟ್ಟಾಗ ಈ ಮರದ ಕೊಂಬೆಗಳು ತುಂಬಾ ಕೆಳಕ್ಕೆ ಬಗ್ಗುವುದರಿಂದ ಮರದ ಕಾಂಡ ಅದಷ್ಟು ಎತ್ತರಕ್ಕೆ ಬೆಳೆಯುವ ಹಾಗೆ ನೋಡಿಕೊಂಡು ಕೊನೆಗಳು ಒಡೆಯಲು ಅವಕಾಶ ಮಾಡಿಕೊಡಬೇಕು.

	ಪ್ಲಮ್ ಬೇಸಾಯಕ್ಕೆ ಉಷ್ಣತೆ ಹೆಚ್ಚಾಗಿರುವ ಹಾಗೂ ಸುಮಾರು 850-1450 ಮೀ. ಎತ್ತರವಿರುವ ಪ್ರದೇಶಗಳು ಅನುಕೂಲ. ಆಳವಾದ ಮತ್ತು ಫಲವತ್ತಾದ ಹಾಗೂ ನೀರನ್ನು ಹಿಡಿದಿಟ್ಟುಕೊಳ್ಳದಿರುವ ಮಣ್ಣು ಇದರ ಬೇಸಾಯಕ್ಕೆ ಉತ್ತಮ ಗುಂಡಿಗಳನ್ನು 4.5-8.0 ಮೀ. ಅಂತರದಲ್ಲಿ ತೋಡಿ ಕೊಟ್ಟಿಗೆ ಗೊಬ್ಬರ ಮತ್ತು ಗೋಡು ಮಣ್ಣನ್ನು ಹಾಕಿ ಕಲಸಿ ಪ್ಲಮ್ ಸಸಿಗಳನ್ನು ನೆಡಬೇಕು.  ಗಿಡಗಳು ಎತ್ತರವಾಗಿದ್ದರೆ ಪಕ್ಕದಲ್ಲಿ ಕಡ್ಡಿಗಳನ್ನು ನೆಟ್ಟು ಅಸರೆ ಕಲ್ಪಿಸಬೇಕು.

	ಕೊಂಬೆಗಳ ಕೊನೆಯಲ್ಲಿರುವ ಕುಸುರಿಗಳಿಂದ ಹೂಗೊಂಚಲು ಹೊರಟು ಫಸಲು ಉತ್ಪತ್ತಿಯಾಗುವ್ಯದರಿಂದ, ಕಸಿ ಮಾಡುವಾಗ ಕುಸುರಿಗಳು ಹಾಳಾಗದಂತೆ ಎಚ್ಚರಿಕೆವಹಿಸಬೇಕು. ಆದರೆ ಫಲವನ್ನು ನಿಯಂತ್ರಿಸಬೇಕಾದ ಅವಶ್ಯಕತೆ ಕಂಡುಬಂದಲ್ಲಿ ಕೆಲವು ಕುಸುರಿಗಳನ್ನು ತೆಗೆಯಬಹುದು. ಜಪಾನ್ ತಳಿಯ ಪ್ಲಮ್ ಗಿಡಗಳು ಹೆಚ್ಚು ಫಸಲು ಬಿಡುವುದರಿಂದ ಆ ಗಿಡಗಳಲ್ಲಿ ಫಸಲು ನಿಯಂತ್ರಣದ ಅವಶ್ಯಕತೆ ಉಂಟು. ಫಸಲಿನ ಒತ್ತಡ ಜಾಸ್ತಿ ಇದ್ದರೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಪ್ಲಮ್ ಗಿಡಗಳಲ್ಲಿ ಕೆಲವು ಹಣ್ಣುಗಳು ತಾವೇತಾವಾಗಿ ಉದುರುವುದುಂಟು.

	ಭಾರತದಲ್ಲಿ ಬೆಳೆಯುವ ಪ್ಲಮ್ ಗಿಡಗಳಲ್ಲಿ ಸಾಮಾನ್ಯವಾಗಿ ರೊಗ ಅಥವಾ ಕೀಟಗಳ ಬಾಧೆ ಕಂಡುಬಂದಿಲ್ಲ. ತೊಗಟೆ ಒಣಗುವ ರೋಗ (ಕ್ಯಾಂಕರ್) ಕೆಲವು ಮರಗಳಲ್ಲಿ ಕಾಣಿಸಿಕೊಳ್ಳುವುದುಂಟು. ಒಣಗಿದ ಭಾಗವನ್ನು ಕೆರೆದು ಹಾಕಿ ಬೊರ್ಡೊಮಿಶ್ರಣವನ್ನು ಲೇಪಿಸಿ ರೋಗವನ್ನು ತಡೆಯಬಹುದು. ಕೆಲವು ಸಲ ಒಂದು ಬಗೆಯ ವೈರಸ್ ರೋಗವೂ ಕಾಣಿಸಿಕೊಳ್ಳುವುದುಂಟು.

	ನಾಟಿ ಮಾಡಿದ 3-4 ವರ್ಷಗಳಲ್ಲಿ ಪ್ಲಮ್ ಗಿಡಗಳು ಹೂಬಿಟ್ಟು ಕಾಯಿಕಚ್ಚುತ್ತವೆ. ಇವುಗಳಿಂದ ಸುಮಾರು 25 ವರ್ಷಗಳ ಕಾಲ ಲಾಭದಾಯಕ ಫಸಲನ್ನು ಪಡೆಯಬಹುದು. ಮಾರುಕಟ್ಟೆ ದೂರ ಇದ್ದರೆ ಅಲ್ಲಿಗೆ ತಲುಪುವವರೆಗೂ ಗಟ್ಟಿಯಾಗಿ ಉಳಿಯುವಂತೆ ದೋರೆಗಾಯಿ ಹಂತದಲ್ಲೊ ಹತ್ತಿರದ ಮಾರುಕಟ್ಟೆಗೆ ಸಾಗಿಸುವುದಾದರೆ ಹೆಚ್ಚು ಪಕ್ವವಾದ ಹಂತದಲ್ಲೊ ಕಾಯಿಗಳನ್ನು ಕೊಯ್ಯುವುದಿದೆ.

	ಭಾರತದಲ್ಲಿ ಮರ ಒಂದಕ್ಕೆ ಸರಾಸರಿ ಇಳುವರಿ 40 ಕೆಜಿ. ಹಿಮಾಚಲ ಪ್ರದೇಶದ ಕೆಲವು ಮರಗಳಲ್ಲಿ 119-150 ಕೆಜಿ ಹಣ್ಣು ಪಡೆದಿರುವುದೂ ಉಂಟು. ಅಮೆರಿಕದ ಫ್ಲಾರಿಡ ಪ್ರಾಂತದಲ್ಲಿ ಸರಾಸರಿ ಇಳುವರಿ 100-150 ಕೆಜಿ ಇದೆ. ಕೆಲವು ಮರಗಳು 300-500 ಕೆಜಿ ಫಸಲನ್ನು ಕೊಟ್ಟಿರುವ ದಾಖಲೆ ಕೂಡ ಇದೆ.

	ಪ್ಲಮ್ ಹಣ್ಣುಗಳನ್ನು ಸಾಮಾನ್ಯವಾಗಿ ಡೆಸರ್ಟ್ ಆಗಿ ಉಪಯೋಗಿಸುತ್ತಾರೆ. ಹಣ್ಣುಗಳ ರಸಾಯನವನ್ನು ಯುಕ್ತ ರೀತಿಯಲ್ಲಿ ಸಂಸ್ಕರಿಸಿ ಬಹುಕಾಲ ಕೆಡದೆ ಇಡಬಹುದು. ಕೆಲವು ತಳಿಗಳನ್ನು ಜಾಮ್ ತಯಾರಿಕೆಯಲ್ಲಿ ಬಳಸುವುದಿದೆ. ಮತ್ತೆ ಕೆಲವು ತಳಿಯ ಹಣ್ಣುಗಳನ್ನು ಒಣಗಿಸಿಡುವುದೂ ಉಂಟು. ಉತ್ತುತ್ತೆ ಹಣ್ಣಿನಂತಿರುವ ಇವನ್ನು ಪ್ರೂನ್ಸ್ ಎಂದು ಕರೆಯಲಾಗುತ್ತದೆ. ಒಣಗಿದ ಹಣ್ಣುಗಳಿಗೆ ವಿರೇಚಕ ಗುಣವುಂಟು, ಬೀಜಗಳನ್ನು ತೆಗೆದು ಹಾಕಿದ ಹಣ್ಣುಗಳನ್ನು ರೊಟ್ಟಿ ತಯಾರಿಕೆಯಲ್ಲಿ ಬಳಸುತ್ತಾರೆ. ಐಸ್‍ಕ್ರೀಮ್ ತಯಾರಿಕೆಗೂ ಪ್ಲಮ್ ಹಣ್ಣುಗಳನ್ನು ಉಪಯೋಗಿಸುತ್ತಾರೆ. ಬೀಜದಲ್ಲಿರುವ ಪಿಷ್ಟ ಫ್ರೂಟ್ ಸಲಡ್, ಪುಡ್ಡಿಂಗ್, ಬರ್ಫಿ ಮುಂತಾದ ತಿನಸುಗಳ ತಯಾರಿಕೆಗೆ ಉಪಯುಕ್ತ, ಪ್ಲಮ್ ಹಣ್ಣಿನ ಬೀಜಗಳ ತಿರುಳಿನಿಂದ ಪಡೆಯಲಾಗುವ ಎಣ್ಣೆಯನ್ನು ಸಾಬೂನು ತಯಾರಿಕೆಗೂ ಯಂತ್ರಗಳ ಕೀಲೆಣ್ಣೆಯಾಗೂ ಉಪಯೋಗಿಸುವುದಿದೆ. ಅಲ್ಲದೆ ದೀಪಗಳಲ್ಲಿ ಹಾಕಿ ಉರಿಸುವುದೂ ಉಂಟು, ಪ್ಲಮ್ ಮರದ ಹೂಗಳಲ್ಲಿರುವ ಬೆಂಜಾಲ್ಡಿಹೈಡ್ ಎಂಬ ವಸ್ತುವಿಗೆ ಮಲ್ಲಿಗೆ ಹೂವಿನ ವಾಸನೆಯುಂಟು. ಇದರಿಂದ ಪರಿಮಳ ಸಾಮಗ್ರಿಗಳನ್ನು ತಯಾರಿಸುವುದಿದೆ. ಪ್ಲಮ್ ತೊಗಟೆಯಿಂದ ದೊರಕುವ ಮೇಣ ಉತ್ತಮ ದರ್ಜೆಯದು. 
(ಡಿ.ಆರ್.ಜಿಒ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ